ಮಾತು ಬೆಳ್ಳಿ ಮೌನ ಬಂಗಾರ ಅಂತಾರೆ. ಮೌನದ ಸಾರ್ಥಕತೆಯನ್ನು ಅವರು ಮಾತುಗಳಲ್ಲಿ ಅಪೂರ್ವವಾಗಿ ಕಟ್ಟಿ ಕೊಟ್ಟರು. ಕತ್ತಲು ಕೆಡುಕು, ಬಿಸುಪಿನ ಬೆಳಕು ಬೇಕು ಅಂತಾರೆ. ಕತ್ತಲನ್ನು ಒಳಗಣ್ಣುಗಳಲ್ಲಿ ಕಾಣುವ, ಕತ್ತಲಿನ ಸಾರ್ಥಕತೆಯನ್ನು ಅರಿಯುವ ಬಗೆಯನ್ನು ಎಳೆಎಳೆಯಾಗಿ ಬಿಡಿಸಿದರು. ಕಾರ್ಯಕ್ರಮ ಕೊನೆಯಾಗುವಾಗ ಕಲಾಂಗಣದಲ್ಲಿ ಹಾಜರಿದ್ದ ಜನರಲ್ಲಿ ವೈಚಾರಿಕತೆಗೆ ತೆರೆದ ಸಾರ್ಥಕ್ಯ. ಇದು ಇಂದು 10.03.24 ರಂದು ಶಕ್ತಿನಗರದ ಕಲಾಂಗಣದಲ್ಲಿ ಆಧುನಿಕ ಸೂಫಿ ಸಂತ ಎಂಬ ಬಿರುದಾಂಕಿತ ನಾದ ಮಣಿನಾಲ್ಕೂರು ಇವರು ನಡೆಸಿ ಕೊಟ್ಟ ಕತ್ತಲ ಹಾಡು ಕಾರ್ಯಕ್ರಮದ ನೋಟ.

ಮೊದಲಿಗೆ ಅಪ್ರತಿಮ ಸಾಧನೆಗೈದು ನಿವೃತ್ತರಾದ, ಬ್ಯಾಂಕಿಂಗ್‌ ಕ್ಷೇತ್ರದ ದಿಗ್ಗಜ ಆಲನ್‌ ಸಿ ಪಿರೇರಾ, ಮಾಂಡ್‌ ಸೊಭಾಣ್‌ ಗುರಿಕಾರ, ವಿಶ್ವ ಕೊಂಕಣಿ ಕಲಾರತ್ನ ಎರಿಕ್‌ ಒಝೇರಿಯೊ, ಕಲಾಕ್ಷೇತ್ರದಲ್ಲಿ ಗಜನಡೆಯನ್ನಿಟ್ಟು ಮುನ್ನಡೆಯುತ್ತಿರುವ ಪರಿಚಯ ಪ್ರತಿಷ್ಟಾನ ಪಾಂಬೂರು ಇದರ ಪ್ರಧಾನ ಕಾರ್ಯದರ್ಶಿ ಪ್ರಕಾಶ್‌ ನೊರೊನ್ಹಾ, ಅಂತರಾಷ್ಟ್ರೀಯ ಖ್ಯಾತಿಯ ಕಲಾವಿದ ವಿಲ್ಸನ್‌ ಕಯ್ಯಾರ್ ಹಾಗೂ ನಾದ ಮಣಿನಾಲ್ಕೂರು ಇವರು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಹಾಜರಿದ್ದ ಪ್ರೇಕ್ಷಕರಿಗೆ ಮುಂದಿನ ಒಂದುವರೆ ಗಂಟೆ, ತಬಲಾ ನಾದದಲ್ಲಿ, ತಂಬೂರಿಯ ನಿನಾದದಲ್ಲಿ, ಹಣತೆಗಳ ಪಿಸುಬೆಳಕಿನಲ್ಲಿ, ಒಡಲಿನ ಕತ್ತಲೆಗೆ ಬೆಳಕಾಗುವ ಬಗೆಯನ್ನು, ಅಂತರಂಗದ ಮೌನಕ್ಕೆ ದನಿಯಾಗುವ ಬಗೆಯನ್ನು ನಾದರವರು ವಿವರಿಸುತ್ತಾ ಹೋದರು. ಬದುಕನ್ನು ಛಿದ್ರಗೊಳಿಸುವ, ಏಕತೆಯನ್ನು ಹರಿದು ಹಂಚಿಹಾಕುವ, ಮನುಜ ಅಹಮಿಕೆಯನ್ನು ಮೀರದೆ ವಿಶ್ವಮಾನವ ಪ್ರಜ್ಞೆ ಬಾರದು, ಪ್ರಕೃತಿಯ ಸಹಜತೆಯಲ್ಲಿ ಹಸ್ತಕ್ಷೇಪ ಮಾಡಿ ವಿವಿಧತೆಯನ್ನು ಏಕತೆ ಮಾಡಿ ಜೀವಿಸುವ ಕೆಡುಕುಗಳ ಬಗ್ಗೆ ಎಚ್ಚರಿಸಿದರು.

ಅಣೆಕಟ್ಟೆ ವಿಶ್ವನಾಥ್, ನಿಡುಮಾಮಿಡಿ ಸ್ವಾಮೀಜಿ, ಮೂಡ್ನಾಕೂಡು ಚಿನ್ನಸ್ವಾಮಿ, ಕಬೀರ ದಾಸ (ಅನುವಾದ -ಗೋಪಾಲ ವಾಜಪೇಯಿ), ಅಕ್ಕಮಹಾದೇವಿ, ಕನಕದಾಸ, ರವೀಂದ್ರನಾಥ್ ಠಾಗೋರ್, ಕೆ ಎಸ್ ನರಸಿಂಹ ಸ್ವಾಮಿ, ಜನಾರ್ಧನ ಕೆಸರಗದ್ದೆ, ಕೃಷ್ಣಮೂರ್ತಿ ಬಿಳಿಗೆರೆ, ಗಿರೀಶ್ ಹಂದಲಕೆರೆ ಹಾಗೂ ಜನಪದರ ಹಾಡುಗಳನ್ನು ಹಾಡುತ್ತಾ, ಆ ಹಾಡುಗಳಲ್ಲಿ ಇರುವ ಅನುಭಾವಿ ತತ್ವಗಳನ್ನು ನಿರರ್ಗಳವಾಗಿ ಮಾತುಗಳಲ್ಲಿ ಕಟ್ಟಿ ಕೊಡುತ್ತಾ, ಪ್ರಜ್ಞೆಯ ಪಾರಮ್ಯವನ್ನು ಮೀರಿದ ವಿಶಿಷ್ಟ ಲೋಕವನ್ನು ನಿರ್ಮಿಸಿದರು. ತಬಲಾದಲ್ಲಿ ಶ್ರೀನಾಥ್‌ ಗುಂಡಿಬೆಟ್ಟು ಸಹಕರಿಸಿದರು. ಕಲಾವಿದ ವಿಲ್ಸನ್‌ ಕಯ್ಯಾರ್‌ ರಚಿಸಿದ ನಾದರವರ ವರ್ಣಚಿತ್ರ ವೇದಿಕೆಗೆ ವಿಶಿಷ್ಟ ಕಳೆ ನೀಡಿತ್ತು.

ಮಾಂಡ್‌ ಸೊಭಾಣ್‌ ಕೋಶಾಧಿಕಾರಿ ಎಲ್ರೊನ್‌ ರೊಡ್ರಿಗಸ್‌ ನಾದರವರಿಗೆ ಮತ್ತು ಸಮಿತಿ ಸದಸ್ಯೆ ಐರಿನ್‌ ರೆಬೆಲ್ಲೊ ಶ್ರೀನಾಥ್ ರಿಗೆ ಹೂಗುಚ್ಛದ ಗೌರವ ಸಮರ್ಪಿಸಿದರು. ಸಾರ್ವಜನಿಕ ಸಂಪರ್ಕಾಧಿಕಾರಿ ವಿಕ್ಟರ್‌ ಮತಾಯಸ್‌ ಪ್ರಸ್ತಾವಿಕ ನುಡಿಗಳಾನ್ನಾಡಿದರು. ಧ್ವನಿ ಮತ್ತು ಅಗತ್ಯ ಬೆಳಕಿನ ವ್ಯವಸ್ಥೆಯನ್ನು ಏಂಜಲ್ಸ್‌ ಸೌಂಡ್ಸ್‌ ಪಡೀಲ್‌ ಇವರು ನಿರ್ವಹಿಸಿದರು. ವಿಕಾಸ್, ಕೇರನ್, ಮನೀಶ್, ಸಂದೀಪ್, ಜೀವನ್, ಸವಿತಾ, ವರ್ಷಿತಾ ಸಹಕರಿಸಿದರು.

Comments powered by CComment

Home | About | NewsSitemap | Contact

Copyright ©2015 www.manddsobhann.org. Powered by

Mandd Sobhann
Kalaangann,
Makale, Shaktinagar,
Mangalore - 575016
Email: [email protected]
Mobile:8105226626